ಶಾಂತಲದೇವಿ
	ಪ್ರಸಿದ್ಧ ಹೊಯ್ಸಳದೊರೆ ವಿಷ್ಣುವರ್ಧನನ ಪಟ್ಟಮಹಿಷಿ. ಇವಳ ಹುಟ್ಟೂರು ಬಲಿಪುರ (ಬಳ್ಳಿಗಾವೆ). ತಾಯಿ ಮಾಚಿಕಬ್ಬೆ, ತಂದೆ ಮಾರಸಿಂಗಯ್ಯ, ಮಾವ ಪೆರ್ಗಡೆ ಸಿಂಗಯ್ಯ, ಗುರು ಪ್ರಭಾಚಂದ್ರ ದೇವ, ಇಷ್ಟದೈವ ಜಿನನಾಥ.  ವಿಷ್ಣುವರ್ಧನ (ನೋಡಿ- ವಿಷ್ಣುವರ್ಧನ-1) ಪಟ್ಟಕ್ಕೆ ಬರುವುದಕ್ಕೆ ಹತ್ತುಹದಿನೈದು ವರ್ಷಗಳಿಗೆ ಹಿಂದೆಯೇ ಅವನು ಶಾಂತಲದೇವಿಯನ್ನು ವಿವಾಹವಾಗಿರಬೇಕು. 1108ರಲ್ಲಿ ಅವನು ರಾಜ್ಯಸೂತ್ರಗಳನ್ನು ವಹಿಸಿಕೊಂಡ ಮೇಲೆ ಎರಡು ದಶಕಗಳಿಗೂ ಹೆಚ್ಚಾಗಿ ರಾಜಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಈಕೆಯ ಪ್ರಭಾವ ಹೆಚ್ಚಾಗಿತ್ತು.

	ಹೊಯ್ಸಳ ರಾಜ್ಯ ಪ್ರಸಿದ್ಧಿಗೆ ಬರುತ್ತಿದ್ದ ಕಾಲದಲ್ಲಿ ಶಾಂತಲೆಗಿದ್ದ ಸ್ಥಾನಮಾನ, ಇವಳ ಗುಣ, ವ್ಯಕ್ತಿತ್ವಗಳನ್ನು ಅನೇಕ ಶಾಸನಗಳು ಹೊಗಳುತ್ತವೆ.  ಪರಮಕಲ್ಯಾಣಾಭ್ಯುದಯ ಶತಸಹಸ್ರಫಳಭೋಗಭಾಗಿನೀ ದ್ವಿತೀಯಲಕ್ಷ್ಮೀ ಸಮಾನೆ, ಅಭಿನವರುಕ್ಮಿಣೀದೇವಿ, ಪತಿಹಿತಸತ್ಯಭಾಮೆ, ವಿವೇಕಯ್ಕಬೃಹಸ್ಪತಿ, ಪ್ರತ್ಯುತ್ಪನ್ನ ವಾಚಸ್ಪತಿ, ಮುನಿಜನವಿನೇಯಜನ ವಿನೀತೆ, ಪತಿಬ್ರತಾಪ್ರಭಾವ ಪ್ರಸಿದ್ಧಶೀಲೆ, ಸಕಳವಂದಿಜನಚಿಂತಾಮಣಿ, ಸಮ್ಯಕ್ತ್ವ ಚೂಡಾಮಣಿ, ಸವತಿಗಂಧವಾರಣೆ, ಚತುಸ್ಸಮಯಸಮುದ್ಧರಣ ಕಾರಣೆ, ನಿಜಕಳಾಭ್ಯುದಯದೀಪಿಕೆ, ಗೀತವಾದ್ಯನ್ರಿತ್ಯಸೂತ್ರಧಾರೆ, ಜಿನಸಮಯಸಮುದಿತಪ್ರಾಕಾರೆ, ಆಹಾರಾಭಯಭೈಷಜ್ಯಶಾಸ್ತ್ರ ದಾನವಿನೋದೆ, ವಿಷ್ಣುವರ್ಧನ ಹೊಯ್ಸಳದೇವರ ಪಿರಿಯರಸಿ, ಪಟ್ಟಮಹಾದೇವಿ-ಇವು ಇವಳ ಕೆಲವು ವಿಶೇಷಣಗಳು.

	ಶಾಂತಲದೇವಿಗೆ ಕುಮಾರ ಬಲ್ಲಾಳನೆಂಬ ಮಗನೂ ಚಿಕ್ಕ ಹರಿಯಲೆ (ಹರಿಯಲಾದೇವಿ) ಎಂಬ ಮಗಳೂ ಇದ್ದರು. ಕುಮಾರ ಬಲ್ಲಾಳ ರಾಜ್ಯಭಾರದಲ್ಲಿ ತಂದೆಗೆ ನೆರವಾಗಿದ್ದು, ಶಾಂತಲೆಗೆ ಮುಂಚೆಯೇ ಮೃತನಾದ. ಹರಿಯಲೆ ಭರತೇಶ ದಂಡನಾಯಕನನ್ನು ಮದುವೆ ಯಾಗಿದ್ದಳು.

	ಶಾಂತಲೆ ಧರ್ಮಶ್ರದ್ಧೆಯಿಂದ ಅನೇಕ ಪುಣ್ಯ ಕೆಲಸಗಳನ್ನು ಮಾಡಿದ್ದಾಳೆ.  ಶ್ರವಣಬೆಳಗೊಳದ ಸವತಿಗಂಧವಾರಣ ಬಸದಿ ಇವಳ ಕೊಡುಗೆ.  ಹಾಸನ ತಾಲ್ಲೂಕಿನಲ್ಲಿ ಶಾಂತಿಗ್ರಾಮವನ್ನು ಸ್ಥಾಪಿಸಿ ಅಲ್ಲಿ ದೇವಾಲಯಗಳನ್ನು ನಿರ್ಮಿಸಿದಳು. ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯದ ಪಕ್ಕದಲ್ಲಿರುವ ಕಪ್ಪೆಚೆನ್ನಿಗರಾಯ ದೇವಾಲಯವನ್ನು ಈಕೆ ಕಟ್ಟಿಸಿದುದಾಗಿ ಅಲ್ಲಿನ ಶಾಸನದಿಂದ ತಿಳಿದುಬರುತ್ತದೆ.  ಕೊನೆಯವರೆಗೂ ಜಿನಭಕ್ತೆಯಾಗಿಯೇ ಇದ್ದರೂ ಎಲ್ಲ ಧರ್ಮಗಳಿಗೂ ಪ್ರೋತ್ಸಾಹ ನೀಡಿದಳು. ರಾಮಾನುಜರ ಅನುಗ್ರಹದಿಂದ ಬಿಟ್ಟಿದೇವ, ವಿಷ್ಣುವರ್ಧನನೆಂಬ ಹೆಸರನ್ನು ತಾಳಲು ಶಾಂತಲೆ ಕಾರಣಳೆಂಬ ಅಭಿಪ್ರಾಯವಿದ್ದರೂ ಇದಕ್ಕೆ ಆಧಾರವಿಲ್ಲವೆಂದು ತೋರುತ್ತದೆ.

	ಬೇಲೂರಿನ ಚೆನ್ನಕೇಶವ ದೇವಾಲಯದ ಮುಂದೆ ಒಂದೇ ಕಲ್ಲಿನಲ್ಲಿ ಕಂಡರಿಸಿರುವ ಅಂಜಲಿಮುದ್ರೆಯಲ್ಲಿರುವ ಸರ್ವಾಲಂಕೃತ ಗಂಡು-ಹೆಣ್ಣಿನ ವಿಗ್ರಹಗಳನ್ನು ವಿಷ್ಣುವರ್ಧನ-ಶಾಂತಲೆಯರೆಂದು ಆರ್. ನರಸಿಂಹಾಚಾರ್ಯರು ಗುರುತಿಸಿದ್ದಾರೆ. ಶಾಂತಲೆ ಪತಿಯೊಡನೆ ಒಡ್ಡೋಲಗದಲ್ಲಿ ಕುಳಿತಿರುವ ಭವ್ಯದೃಶ್ಯದ ಕಲಾಕೃತಿ ಕೇಶವ ದೇವಾಲಯದ ಮುಂಭಾಗದ ಗೋಡೆಯ ಮೇಲಿನ ಚಿತ್ತಾರದ ಜಾಲಂಧ್ರವೊಂದರ ಮೇಲಿದೆ. ಶಾಂತಲದೇವಿ 1131ರಲ್ಲಿ ಶಿವಗಂಗೆಯ ತೀರ್ಥದಲ್ಲಿ ಮುಡುಪಿ ನಿಧನಳಾದಳು.	
												(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ